Wednesday, March 11, 2009

ಅಂದು - ಇಂದು

" ನಿಮಗೆ ಚಾಕಲೇಟ್ ತಿನ್ನಲು ಹಣ ಯಾರು ಕೊಟ್ಟರು ?"
ಅಪ್ಪನ ಗಡಸು ದನಿಗೆ, ಓದಲು ಕುಳಿತಿದ್ದ ಮೂರು ಪುಟ್ಟ ಮಕ್ಕಳು ಬೆಚ್ಚಿ ಬಿದ್ದರು.
"ಹೇಳಿ, ಯಾರು ಕೊಟ್ಟಿದ್ದು?"
" ವಾಸು ಅಂಕಲ್ ಸಿಕ್ಕಿದ್ರು ಆವ್ರು ಕೊಟ್ರು" ನಡುಗಿದ ದನಿಯಲ್ಲಿ ಯಾರೋ ಒಬ್ಬರು ಉತ್ತರಿಸಿದರು.
"ಸುಳ್ಳ್ಳು ಹೇಳೊದನ್ನ ಬೇರೆ ಕಲಿತಿದ್ದಾರೆ. ಅದಕ್ಕೆ ಹೇಳೋದು ಮಕ್ಕಳನ್ನ ಜಾಸ್ತಿ ಮುದ್ದು ಮಾಡ್‌ಬಾರ್ದೂ ಅಂತ. ಕೇಳಿದ್ಯಾ. ಒಂದು ದಿನ ಆದ್ರೂ ಇವರ ಮೇಲೆ ಕೈ ಮಾಡಿದ್ಯಾ?" ಅಮ್ಮನಿಗೆ ಏನು ನಡೆಯುತ್ತಿದೆ ಅಂತಾನೆ ತಿಳಿಯಲಿಲ್ಲ. ಗಲಿಬಿಲಿಗೊಂಡ ಅವರು,
"ಈಗ ಎನ್ಣಾಯ್ತು?"
"ಶೆಟ್ಟರ ಅಂಗಡಿಗೆ ಹೋಗಿ ಚಾಕಲೇಟ್ ತಗೊಂಡು ಬಂದಿದ್ದಾರೆ. ಎಲ್ಲಿ ಇತ್ತು ಇವರ ಬಳಿ ಹಣ? ಎಲ್ಲೋ ಕದ್ದೀರಬೇಕು. ಅಂಗಡಿಯವನು ನಿಮ್ಮ ಮಕ್ಕಳು ಈಗಷ್ಟೇ ಚಾಕ್ಲೆಟ್ ತಗೊಂಡು ಹೋದರು ಅಂತ ಹೇಳಿದಾಗಲೇ ನನಗೆ ತಿಳಿದದ್ದು" ಅಂದು ಮೂವರಿಗೂ ಬೆಲ್ಟಿನ ರುಚಿ ತೋರಿಸಿಯೇ ಬಿಟ್ಟರು ಅಪ್ಪ. "ರಾತ್ರಿ ಊಟ ಹಾಕ್ಬೇಡ ಇವರಿಗೆ ಬುದ್ದಿ ಬರುತ್ತೆ " ಅಮ್ಮ ಅಸಹಾಯಕರಾಗಿ ನಿಂತಿದ್ದರು.
ಬರೀ ಚಾಪೆಯ ಮೇಲೆ ಮಲಗಿದ ಮಕ್ಕಳ ಮನಸಲ್ಲಿ ಒಂದೇ ಪ್ರಶ್ನೆ " ಆಟವಾಡುತ್ತಾ ಬರುತ್ತಿದ್ದಾಗ, ನೆಲದ ಮೇಲೆ ಬಿದ್ದಿದ್ದ ಐದು ಪೈಸೆಯಲ್ಲಿ ಚಾಕ್ಲೆಟ್ ಕೊಂಡು ತಿಂದದ್ದು ಅಪರಾಧವೇ?"
ಮುಸು ಮುಸು ಅಳುತ್ತಾ, ಏಟಿನ ನೋವಿಗೆ ನಿದ್ದೆಗೆ ಜಾರಿದ ಮಕ್ಕಳು ಎದ್ಡಿದ್ದು, ಮಧ್ಯ ರಾತ್ರಿ ಅಮ್ಮ ಹೆಸರುಬೇಳೆ ಪಾಯಸ ಕುಡಿಯಲು ಕೊಟ್ಟು ಸಂತೈಸಿದಾಗ. ಅಮ್ಮನ ಹೂಮುತ್ತಿಗೆ, ಎಲ್ಲ ಮರೆತು ನಿದ್ರೆಗೆ ಜಾರಿದರು.

"ಅಮ್ಮಾ, ನಂಗೆ ಏನು ತಂದಿದ್ದೀಯಾ?" ಬಾಗಿಲ ಬಳಿ ತನ್ನ ಬರುವಿಕೆಗೆ ಕಾಯುತ್ತ ನಿಂತಿದ್ದ ಐದು ವರ್ಷದ ಪೋರಿಯ ಪ್ರಶ್ನೆ
"ಸುಸ್ತಾಗಿತ್ತು ಚಿನ್ನು, ಏನು ತರೋಕೆ ಆಗಿಲ್ಲ. ನಾಳೆ ತರ್ತೀನಿ ಸರಿನ?"
"ಹೋಗು ನಾನು ನಿನ್ ಹತ್ರ ಮಾತಾಡೋಲ್ಲ , ನೀನು ಕೆಟ್ಟವಳು " ಪಟ್ಟನೆ ಹೇಳಿದಳು
"ಯಾಕೆ ಚಿನ್ನು , ಅಮ್ಮಂಗೆ ಸುಸ್ತಾಗಿದೆ ಅಲ್ವ ದಿನಾ ಚಾಕ್ಲೆಟ್ ತಿನ್ಬಾರ್ದು ಹಲ್ಲು ಹಾಳಾಗುತ್ತೆ " ಮನವೊಲಿಸಲು ಪ್ರಯತ್ನಿಸಿದಳು.
"ನಂಗೆ ಈಗಲೇ ಬೇಕು. ಅಜ್ಜಿಗೆ ಕೇಳಿದ್ರೆ ದುಡ್ಡು ಇಲ್ಲ ಅಂತಾರೆ. ನಾಳೆಯಿಂದ ನನ್ನ ಚಾಕಲೇಟ್ಗೆ ಅಂತ ಅಜ್ಜಿ ಹತ್ರ ದುಡ್ಡು ಕೊಟ್ಟು ಹೋಗು " ಪುಟ್ಟ ಪೋರಿಯ ಮಾತಿನ ಪರಿಗೆ ನಗಬೇಕೋ , ಬಯ್ಯಬೇಕೋ ತಿಳಿಯದೆ ಒಳ ನಡೆದಳು ಚಾಕ್ಲೆಟ್ ತರದ "ಕೆಟ್ಟ ಅಮ್ಮ".

6 comments:

  1. ಚೆನ್ನಾಗಿದೆ ಬೀನಾಜಿ,
    ಕಥೆಯೊಳಗಿನ ಮಗುವಿನ ಮುಗ್ಧತೆಯಷ್ಟೇ..ನಿಮ್ಮ ಬರಹಕ್ಕೋ ಆಪ್ತತೆಯಿದೆ,
    ಅಭಿನಂದನೆಗಳು,
    ಸುನಿಲ್.

    ReplyDelete
  2. ಧನ್ಯವಾದಗಳು ಸ್ನೇಹಿತರೇ...:)

    ReplyDelete
  3. ಚೆನ್ನಾಗಿದೆ.. ಇಂದು ದುಡ್ಡು ಹೆಚ್ಚಾಗಿದೆ.. ಮುಗ್ದತೆ ಕಡಿಮೆ..

    ReplyDelete